Tuesday, June 21, 2011

ಮಂಜುನಾಥನ ಜೊತೆಗೆ ಡೀಲ್ ಮಾಡಿದ್ದೇನೆ ಕಣ್ರೀ...


ರಾಜ್ಯಾದ್ಯಂತ ಆನೆಗಳು ಒಂದರ ಹಿಂದೆ ಒಂದರಂತೆ ನಾಡಿಗೆ ದಾಳಿಯಿಟ್ಟು ಎಲ್ಲವನ್ನು ಚೆಲ್ಲಾಪಿಲ್ಲಿ ಮಾಡುತ್ತಿದ್ದರೆ, ಇತ್ತ ವಿಧಾನಸಭೆಯಲ್ಲಿ ‘ಆಣೆ’ಗಳ ದಾಳಿ ಆರಂಭವಾಗಿದೆ. ಒಂದಾಣೆ... ಎರಡಾಣೆ... ಮೂರಾಣೆ.... ಎಂದು ರಾಜ್ಯ ಸರಕಾರದ ಬೆಲೆಯನ್ನು ದೇಶದ ಜನರು ಆಣೆಯಲ್ಲಿ ಲೆಕ್ಕ ಹಾಕುತ್ತಿದ್ದಾಗಲೇ... ಯಡಿಯೂರಪ್ಪ ‘ಧರ್ಮಸ್ಥಳದಲ್ಲಿ ಆಣೆ ಹಾಕುತ್ತೇನೆ’’ ಎಂದು ಘೋಷಿಸಿ ಬಿಡುವುದೇ? ಪತ್ರಕರ್ತ ಎಂಜಲು ಕಾಸಿಗೆ ರೋಮಾಂಚನವಾಯಿತು. ಇಡೀ ವಿಧಾನಸೌಧವೇ ಧರ್ಮಸ್ಥಳಕ್ಕೆ ಎತ್ತಂಗಡಿಯಾಗುತ್ತಿರುವುದರಿಂದ ಈ ಆಣೆಯನ್ನು ರಾಷ್ಟ್ರಾದ್ಯಂತ ಚಲಾವಣೆಗೆ ತಂದರೆ ಒಳ್ಳೆಯದಲ್ಲವೆ? ಎನ್ನುವ ಆಲೋಚನೆ ಅವನ ಮನದಲ್ಲಿ ಸುಳಿದು ಹೋಯಿತು.

ಸರಿ, ಯಡಿಯೂರಪ್ಪರನ್ನು ಬೇಡಿ ಒಂದು ಸಂದರ್ಶನವನ್ನಾದರೂ ತೆಗೆದುಕೊಳ್ಳೋಣ ಎಂದು ಅವರ ನಿವಾಸಕ್ಕೆ ದೌಡಾಯಿಸಿದರು. ಅಲ್ಲಿ ನೋಡಿದರೆ ಯಡಿಯೂರಪ್ಪರ ಅಂಗರಕ್ಷಕರು ಕಾಸಿಯನ್ನು ತಡೆದರು. ‘‘ಒಳ ಹೋಗುವ ಮೊದಲು ಆಣೆ ಮಾಡಬೇಕಾಗುತ್ತದೆ’’ ಅಂಗರಕ್ಷಕರು ಹೇಳಿದರು.ಕಾಸಿ ಕಂಗಾಲಾದ. ಮೊದಲೆಲ್ಲ ಮಾರಕಾಯುಧ ಇದೆಯೇ ಎಂದು ತಪಾಸಣೆ ಮಾಡಲಾಗುತ್ತಿತ್ತು. ಇದೇನು ಆಣೆ? ಅವನಿಗೆ ಅರ್ಥವಾಗಲಿಲ್ಲ. ‘‘ನೋಡ್ರೀ...ಯಡಿಯೂರಪ್ಪ ಅವರು ಕೊಟ್ಟ ಕೇಸರಿಬಾತ್, ಚೌಚೌ ಬಾತ್ ತಿಂದು ಅವರ ವಿರುದ್ಧ ಪತ್ರಿಕೆಯಲ್ಲಿ ಬರೆಯುವುದಿಲ್ಲ ಎಂದು ಆಣೆ ಮಾಡಬೇಕು. ಹಾಗಾದಲ್ಲಿ ಮಾತ್ರ ಒಳಗೆ ಪ್ರವೇಶ’’.

‘‘ನನ್ನ ಸಂಪಾದಕರ ಮೇಲೆ ಆಣೆ ಮಾಡಿ ಹೇಳ್ತೇನೆ...ನಾನು ಯಡಿಯೂರಪ್ಪ ವಿರುದ್ಧ ಬರೆಯೋಲ್ಲ...’’ ಕಾಸಿ ಆಣೆ ಮಾಡಿಯೇ ಬಿಟ್ಟ. ಅಂಗರಕ್ಷಕರು ಆತನ ತಲೆಗೆ ಕುಟುಕಿ ಹೇಳಿದರು ‘‘ಅದೆಲ್ಲ ಹಾಗೋಲ್ಲ...’’
ಕಾಸಿಗೆ ಪಿಕಲಾಟಕ್ಕಿಟ್ಟುಕೊಂಡಿತು ‘‘ಸಂವಿಧಾನದ ಮೇಲೆ ಆಣೆ ಹಾಕಲಾ?’’ ಮುಗ್ಧವಾಗಿ ಕೇಳಿದ.
‘‘ಅದೂ ಆಗಲ್ಲ. ಮಂಜುನಾಥನ ಮೇಲೆ ಆಣೆ ಹಾಕ್ಬೇಕು...’’
ಕಾಸಿ ‘‘ಮಂಜುನಾಥ್ ಯಾರವ್ರ?’’ ಎಂದು ಗೊಂದಲದಿಂದ ಕೇಳಿದ.
‘‘ಅವ್ರೇ ಕಣ್ರೀ...ನೀವು ಪತ್ರಿಕೆಗಳಲ್ಲಿ ಜಾಹೀರಾತು ನೋಡಿಲ್ವ? ಧರ್ಮಸ್ಥಳದ ಮಂಜುನಾಥ ಸ್ವಾಮಿ...ಆಣೆ ಮಾಡ್ತೀರಾ?’’
‘‘ಮಾಡ್ತೀನಿ ಕಣ್ರೀ...ಒಳಗೆ ಬಿಡ್ರಿ....’’ ಎಂದವನೇ ಕಾಸಿ ಒಳ ನುಗ್ಗಿದ. ಅಲ್ಲಿ ಯಡಿಯೂರಪ್ಪ ತನ್ನ ಸಚಿವರಲ್ಲಿ ಕೇಳುತ್ತಾ ಇದ್ದರು ‘‘ಹೇಳಿ...ಮಂಜುನಾಥನ ಮೇಲೆ ನನ್ನ ಪರವಾಗಿ ಯಾರು ಆಣೆ ಹಾಕ್ತೀರಿ? ಈಗ ಮರ್ಯಾದೆಯ ಪ್ರಶ್ನೆ. ಸವಾಲು ಹಾಕಿಯಾಗಿದೆ. ಕುಮಾರಸ್ವಾಮಿ ದಿನ ನಿಗದಿ ಮಾಡಿದ್ದಾರೆ. ನನ್ನ ಪರವಾಗಿ ಆಣೆ ಹಾಕ್ತೀರೇನ್ರಿ ರೇಣುಕಾಚಾರ್ಯ ಅವರೇ?’’
ರೇಣುಕಾಚಾರ್ಯ ನಿಂತಲ್ಲೇ ತೂರಾಡಿದರು.

‘‘ಸಾರ್...ನಾನು ನಿಮ್ಮ ಪಿಚ್ಚರ್ ತೆಗೀತಾ ಇದ್ದೇನೆ ಸಾರ್. ಏನಾದರೂ ತೊಂದರೆಯಾದರೆ ಪಿಚ್ಚರ್ ಅರ್ಧದಲ್ಲಿ ನಿಲ್ಲುತ್ತೆ ಸಾರ್...ಪಿಚ್ಚರ್‌ನಲ್ಲಿ ‘‘ಆಣೆ ಆಣೆ ನನ್ನಾಣೆ...ಧರ್ಮಸ್ಥಳದಾಣೆ’’ ಎಂಬ ಒಂದು ಸಾಂಗ್‌ನಲ್ಲಿ ನೀವು ಡ್ಯಾನ್ಸ್ ಮಾಡೋ ಒಂದು ಸೀನ್ ಇದೆ ಸಾರ್....ನೀವು ಆಣೆ ಮಾಡ್ತಾ ಇರೋವಾಗ ದೇವೇಗೌಡರ ತಲೆ ಡಬಡಬಾಂತ ಪುಡಿಯಾಗುತ್ತೆ ಸಾರ್....ಸಾರ್ ಪ್ಲೀಸ್ ಸಾರ್....’’

ಗೃಹ ಸಚಿವ ಅಶೋಕ್ ಅವರು ಅದೆಲ್ಲೋ ಮುಖ ಮಾಡಿ ನಿಂತಿದ್ದರು. ‘‘ಏನ್ರೀ ಅಶೋಕ್ ನೀವು ಹೋಗ್ತೀರಾ....?’’ ಯಡಿಯೂರಪ್ಪರು ಕೇಳುತ್ತಿದ್ದಂತೆಯೇ ‘‘ಆಣೆ ಗೀಣೆಯಲ್ಲೆಲ್ಲ ನನಗೆ ನಂಬಿಕೆಯಿಲ್ಲ ಸಾರ್. ದೇವರಲ್ಲೂ ನಂಬಿಕೆಯಿಲ್ಲ. ಸುಮ್‌ಸುಮ್ನೆ ಹೋಗಿ ಆಣೆ ಹಾಕಿದರೆ ಸರಕಾರ ಬಿದ್ದು ಬಿಡಬಹುದು ಸಾರ್... ನಂಬಿಕೆಯಿಲ್ಲದವ ರೆಲ್ಲ ಅಲ್ಲಿಗೆ ಹೋಗಬಾರದು ಸಾರ್...’’ ಎಂದು ಹೇಳಿದವರು ಮನದಲ್ಲೇ ‘ಕಾಪಾಡು ಮಂಜುನಾಥ’ ಎಂದು ಪಠಿಸತೊಡಗಿದರು.ಯಡಿಯೂರಪ್ಪ ಚಿಂತೆಗೊಳಗಾದರು. ‘‘ನೋಡ್ರೀ...ಈಗ ಕುಮಾರಸ್ವಾಮಿ ಆಣೆ ಮಾಡೋದಕ್ಕೆ ಬರೋದು ಕನ್‌ಫರ್ಮ್ ಆಗಿದೆ. ನಾನು ಆ ದಿನ ತುಂಬಾ ಬ್ಯುಸಿಯಾಗಿದ್ದೇನೆ. ಮುಖ್ಯವಾಗಿ ನೆರೆ ಪರಿಹಾರ, ಕೆರೆ ಪರಿಹಾರ... ಇತ್ಯಾದಿ ಇತ್ಯಾದಿ ಯೋಜನೆಗಳ ಉದ್ಘಾಟನೆಗಳಿವೆ. ಕರ್ನಾಟಕದ ಅಭಿವೃದ್ಧಿ ನನ್ನ ಗುರಿಯಾಗಿರುವುದರಿಂದ ಅವತ್ತು ನಾನು ಹೋದರೆ ಚೆನ್ನಾಗಿರುವುದಿಲ್ಲ. ಯಾರಾದರೂ ಹೋಗ್ತೀರೇನ್ರಿ...’’

ಈಶ್ವರಪ್ಪ ಅದಾವುದೋ ಕಡತ ನೋಡು ವುದರಲ್ಲಿ ಮಗ್ನರಾದವರಂತೆ ನಟಿಸತೊಡಗಿ ದರು. ಅಷ್ಟರಲ್ಲಿ ರೇಣುಕಾಚಾರ್ಯರು ಸಲಹೆ ನೀಡಿದರು ‘‘ಸಾರ್...ರೆಡ್ಡಿ ಸಹೋದರ ರನ್ನು ಕಲಿಸೋಣ ಸಾರ್...ಆಣೆ ಹಾಕಿದಾಕ್ಷಣ ಅವರ ತಲೆ ಒಡೆದು ಚೂರಾಗುತ್ತೆ. ಆರೋಪ ಮಂಜುನಾಥನ ಮೇಲೆ ಬೀಳುತ್ತೆ. ನಮ್ಮ ಸರಕಾರಕ್ಕೂ ಕಾಟ ತಪ್ಪಿದ ಹಾಗಾಗುತ್ತೆ’’
‘‘ಉಪಾಯ ಚೆನ್ನಾಗಿದೆ. ಆದ್ರೆ ಅವರೇಕೆ ಹೋಗುತ್ತಾರೆ? ವರ್ತೂರು ಪ್ರಕಾಶ್‌ರನ್ನು ಕಲಿಸೋಣ’’ ಯಡಿಯೂರಪ್ಪ ಹೇಳಿದರು. ಬಿಜೆಪಿಯ ಸಚಿವಾಕಾಂಕ್ಷಿಗಳೆಲ್ಲ ಒಕ್ಕೊರಲಲ್ಲಿ ಅನುಮೋದಿಸಿದರು. ಆದರೆ ವರ್ತೂರು ಅಳತೊಡಗಿದರು ‘‘ಸಾರ್...ನನಗೆ ಸಚಿವ ಸ್ಥಾನ ಕೊಡದೇ ಇದ್ದರೂ ಪರವಾಗಿಲ್ಲ... ನನ್ನನ್ನು ನನ್ನಷ್ಟಕ್ಕೆ ಬದುಕುವುದಕ್ಕೆ ಬಿಡಿ ಸಾರ್...’’

ಯಡಿಯೂರಪ್ಪ ಸಮಾಧಾನಿಸಿದರು ‘‘ವರ್ತೂರು ಅವರೇ, ಸರಕಾರ ಬೀಳೋವಾಗ ನೀವೇ ನಮ್ಮನ್ನು ಕಾಪಾಡಿದ್ರಿ. ಈಗ್ಲೂ ನಮ್ಮ ಸರಕಾರ ನಿಮ್ಮ ಕೈಯಲ್ಲೇ ಇದೆ. ನಿಮಗೇನೂ ಆಗಲ್ಲ...ನಾನು ಭರವಸೆ ಕೊಡ್ತೀನಿ. ಧರ್ಮಸ್ಥಳಕ್ಕೆ ಸಾಕಷ್ಟು ಅನುದಾನ ಬಿಡುಗಡೆ ಮಾಡಿದ್ದೇನೆ. ಅಷ್ಟೇ ಅಲ್ಲ, ಆಣೆ ಮಾಡಿ ಏನೂ ಅನಾಹುತ ಆಗದಿದ್ದಲ್ಲಿ ಇನ್ನಷ್ಟು ಹಣ ಬಿಡುಗಡೆ ಮಾಡುತ್ತೇನೆ ಅಂತಹ ಡೀಲ್ ಮಾಡಿದ್ದೇನೆ ಕಣ್ರೀ....ನೀವು ನನ್ನ ಕಡೆ ಇದ್ದ ಹಾಗೆಯೇ ಮಂಜುನಾಥ ಕೂಡ ನನ್ನ ಕಡೆ ಇದ್ದಾನೆ ಕಣ್ರೀ...’’

ವರ್ತೂರು ಗಡ್ಡ ಕೆರೆಯುತ್ತಾ ಹೇಳಿದರು ‘‘ಸಾರ್...ಈ ಸಾಬ್ರುಗೆಲ್ಲ ಆಣೆ ಮೇಲೆ ನಂಬಿಕೆ ಇರಾಕಿಲ್ಲ...ನಮ್ಮ ಮುಮ್ತಾಜ್ ಖಾನ್ ಅವರನ್ನು ಕಳುಹಿಸಿದ್ರೆ ಹೇಗೆ...?’’
ಯಡಿಯೂರಪ್ಪ ಸಿಟ್ಟಾದರು ‘‘ಈಗಾಗಲೇ ಚರ್ಚ್ ದಾಳಿಯಿಂದ ನಿಟ್ಟುಸಿರು ಬಿಟ್ಟಿದ್ದೇನೆ. ಇನ್ನು ಈ ಸಾಬಿಯನ್ನು ಅಲ್ಲಿಗೆ ಕಳುಹಿಸಿ ಅಲ್ಲೇನಾದ್ರು ಆದ್ರೆ ಮುಸಲರು ದಂಗೆ ಎದ್ದು ಬಿಟ್ಟಾರು. ಕೋಮುಗಲಭೆಯಾದೀತು ಕಣ್ರೀ...’’
‘‘ಸಾರ್ ಶೋಭಾನ್ನ ಕಳಿಸೋಣ ಸಾರ್... ಹೆಣ್ಣು ಮಗಳು... ಜೊತೆಗೆ ಧರ್ಮಸ್ಥಳಕ್ಕೆ ಸಮೀಪದ ಪುತ್ತೂರಿನವರು...ಅವರಿಗೇನು ಆಗಾಕಿಲ್ಲ...’’ ಯಾರೋ ಗುಂಪಿನ ನಡುವಿನಿಂದ ಹೇಳಿದರು.
ಯಡಿಯೂರಪ್ಪ ಒಮ್ಮೆಲೆ ಕೆಂಡವಾದರು ‘‘ನನ್ನ ಮಕ್ಕಳನ್ನಾದರೂ ಕಳುಹಿಸುತ್ತೇನೆ. ಆದರೆ ಶೋಭಾನ್ನ ಕಳುಹಿಸೋಲ್ಲ...’’
ಯಡಿಯೂರಪ್ಪರ ಸುಪುತ್ರ ರಾಘವೇಂದ್ರ ಅಳುತ್ತಾ ‘‘ಅಪ್ಪಾ ನಾನು ಹೋಗಾಕಿಲ್ಲ’’ ಎಂದ.

No comments: